■ ‘ಪ್ರೊಫೆಷನ್’ಗೂ ರಿಲೇಷನ್’ಗೂ ಬೆಸುಗೆ ಹಾಕೋದು ತಪ್ಪಲ್ವಾ?’ – ಪಾರ್ವತಮ್ಮ ರಾಜಕುಮಾರ್ ■
“””””””””””””””””””””””””‘”””””‘””””””””””‘””””””””””””””””””””””””””””””””””””””
ಲೇಖನ : ಶ್ರೀ ಗಣೇಶ್ ಕಾಸರಗೋಡು ಹಿರಿಯ ಸಿನಿಮಾ ಪತ್ರಕರ್ತರು
∆ ಕೇರಳದ ‘ಹೇಮಾ’ ವರದಿ ಇಡಿಯ ಭಾರತೀಯ ಚಿತ್ರರಂಗದಲ್ಲೇ ಸುನಾಮಿ ಎಬ್ಬಿಸಿದೆ. ಇಂಥಾ ಹೊತ್ತಿನಲ್ಲಿ ಆ ಕಾಲದಲ್ಲೇ ಪಾರ್ವತಮ್ಮ ರಾಜಕುಮಾರ್ ಆಡಿರುವ ಮಾತುಗಳು ಎಷ್ಟೊಂದು ಪ್ರಸ್ತುತ, ನೀವೇ ಓದಿ ನೋಡಿ :
“”””””””””””””””””””””””””””””””””””””””””‘”””””””””””””””””””””””””‘”””””””””””
∆ ಈಗ ಕನ್ನಡ ಚಿತ್ರರಂಗದ ಸರದಿ ∆
“”””””””””””””””””””””””””””””‘”””””””””””””””””””””””””””””””””””””””””””””””””
ತಮ್ಮ ನಿಜವಾದ ಪ್ರತಿಭೆಯಿಂದ, ನಯನಾಜೂಕಿನ ನಡೆ ನುಡಿಗಳಿಂದ ಮತ್ತು ಅಪ್ರತಿಮ ಸೌಂದರ್ಯದಿಂದ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ನಾಯಕಿಯರ ಈ ಪಟ್ಟಿಯನ್ನೊಮ್ಮೆ ಗಮನಿಸಿ : ಹರಿಣಿ, ಕೃಷ್ಣಕುಮಾರಿ, ಲೀಲಾವತಿ, ಪಂಡರೀಬಾಯಿ, ಸರೋಜಾದೇವಿ, ಜಮುನಾ, ಜಯಂತಿ, ಆರತಿ, ಭಾರತಿ, ವಾಣಿಶ್ರೀ, ದೀಪಾ, ಅರ್ಚನಾ, ಮಾಧವಿ, ಅಂಬಿಕಾ, ಗೀತಾ, ಮಂಜುಳಾ, ಜಯಪ್ರದಾ, ಜಯಸುಧಾ, ಪದ್ಮಪ್ರಿಯಾ, ಊರ್ವಶಿ, ರೂಪಾದೇವಿ, ಜಯಮಾಲಾ, ಕಲ್ಪನಾ, ಲಕ್ಷ್ಮೀ, ರಾಜಶ್ರೀ, ಸುಮಲತಾ, ರೇಖಾ…ಈ ಎಲ್ಲರೂ ಸುರಸುಂದರಿಯರೇ. ಎಲ್ಲರೂ ವರನಟ ರಾಜಕುಮಾರ್ ಅವರ ನಾಯಕಿಯರಾಗಿ ಮಿಂಚಿದವರೇ. ಇಂಥಾ ನಾಯಕಿಯರ ಜತೆ ನಟಿಸುವಾಗ ಒಂದು ಹಂತದ ಸಲಿಗೆ ಸಹಜ, ಅನಿವಾರ್ಯ! ರಾಜಕುಮಾರ್ ಅವರ ತೆರೆಯ ಮೇಲಿನ ನಾಯಕಿಯರಾದ ಇವರ ಜತೆಗಿನ ಸಹಜ ಸಲಿಗೆಯನ್ನು ರಾಜ್ ಅವರ ನಿಜ ಜೀವನದ ‘ನಾಯಕಿ’ಯಾದ ಪಾರ್ವತಮ್ಮ ರಾಜಕುಮಾರ್ ಅವರು ಹೇಗೆ ಸ್ವೀಕರಿಸಿರಬಹುದು? ಅವರಿಗೆ ಅಸೂಯೆ ಆಗಲಿಲ್ಲವೇ? ಮುಜುಗರವಾಗಲಿಲ್ಲವೇ? – ಇದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಆ ದಿನ ನಾನು ಸದಾಶಿವನಗರದ ಮನೆಯಲ್ಲಿ ಉತ್ತರಕ್ಕಾಗಿ ಕಾಯುತ್ತಿದ್ದಾಗ ಪಾರ್ವತಮ್ಮ ಹೇಳಿದ್ದೇನು ಗೊತ್ತಾ?
‘ಅದು ನಟನೆ ಎನ್ನುವುದನ್ನು ಮೊದಲು ನಾವು ಖಚಿತ ಪಡಿಸಿಕೊಳ್ಳಬೇಕು. ಈ ರಂಗದಲ್ಲಿ ಅನ್ಯೋನ್ಯತೆ ಇರಬೇಕಾದದ್ದು ತೀರಾ ಸಹಜ. ಇದನ್ನೇ ತಪ್ಪು ತಿಳಿದುಕೊಂಡರೆ ನನ್ನಂಥವರು ಬದುಕಲು ಸಾಧ್ಯವೇ? ನನ್ನ ಯಜಮಾನರ ಬಗ್ಗೆ ನನಗೆ ಸಂಪೂರ್ಣ ನಂಬಿಕೆಯಿದೆ. ಅಳತೆ ಮೀರಿದ ಸಂಬಂಧದ ಬಗ್ಗೆ ಅನುಮಾನ ಸಹಜ. ಆದರೆ ನಮ್ಮವರದ್ದು ಅಳತೆ ಮೀರದ ನಡವಳಿಕೆ. ಕಾಯಾ ವಾಚಾ ಮಾನಸಾ ಅವರು ನನ್ನನ್ನು ವರಿಸಿದ್ದಾರೆ. ತೆರೆಯ ಮೇಲಿನದ್ದು ನಿರ್ದೇಶಕರ ಆಣತಿಯಂತೆ ನಟಿಸುವ ಕಾಯಕ. ಅದು ಇವರ ಪ್ರೊಫೆಷನ್. ಪ್ರೊಫೆಷನ್’ಗೂ ರಿಲೇಷನ್’ಗೂ ಬೆಸುಗೆ ಹಾಕೋದು ತಪ್ಪಲ್ವಾ? ರೋಮಾಂಟಿಕ್ ಸನ್ನಿವೇಶಗಳಲ್ಲಿ ಅಪ್ಪುಗೆ ಅನಿವಾರ್ಯ. ಇಷ್ಟಕ್ಕೇ ಬೇರೆ ಅರ್ಥ ಕಲ್ಪಿಸೋದು ನ್ಯಾಯಾನಾ? ನಿರ್ದೇಶಕರು ಏನು ಹೇಳುತ್ತಾರೋ ಕಲಾವಿದರಾದವರು ಅದನ್ನು ಮಾಡಬೇಕು. ಕ್ಯಾಮೆರಾ ಮುಂದೆ ಮಾತ್ರ ನಮ್ಮ ಯಜಮಾನರು ಆಯಾ ಚಿತ್ರದ ನಾಯಕಿಯರ ನಾಯಕರಾಗಿರುತ್ತಾರೆ. ಆದರೆ ಕ್ಯಾಮೆರಾ ಹಿಂದೆ ಅವರು ನನಗೆ ನಾಯಕರು…’ – ಎಂದು ಹೇಳಿ ಪಾರ್ವತಮ್ಮ ಅವರು ಒಂದು ವಿಚಿತ್ರ ನಗೆ ನಕ್ಕಿದ್ದನ್ನು ನಾನು ಮರೆಯೋದುಂಟಾ?
‘ತಿಪಟೂರಿನ ರಾಮಸ್ವಾಮಿಯವರು ನಿಮ್ಮ ಸವತಿಯಂತೆ ಹೌದಾ?’ – ನನ್ನ ಮತ್ತೊಂದು ಕೀಟಲೆ ಪ್ರಶ್ನೆಗೆ ಪಾರ್ವತಮ್ಮ ನಗುತ್ತಾ ಉತ್ತರಿಸಿದ್ದು ಹೀಗೆ : ‘ಅವರು ನಮ್ಮ ಯಜಮಾನರ ಬಾಲ್ಯದ ಗೆಳೆಯರು. ಇವರದ್ದು ಬಿಟ್ಟಗಲದ ಸ್ನೇಹ. ಇವರಿಬ್ಬರದ್ದು ಎಂಥಾ ಗಟ್ಟಿ ಗೆಳೆತನವೆಂದರೆ ರಾಮಸ್ವಾಮಿಗಳ ಜೊತೆ ಮಾತಿಗೆ ನಿಂತರೆ ಸಾಕು, ನನ್ನನ್ನೇ ಮರೆತು ಬಿಡುತ್ತಿದ್ದರು! ಹೌದು ಕಣ್ರೀ, ಅವರಿವರೇಕೆ ನಾನೇ ರಾಮಸ್ವಾಮಿಯವರನ್ನು ನನ್ನ ಸವತಿ ಎಂದೇ ಕರೆಯುತ್ತೇನೆ! ಅವರ ನೆನಪಾದರೆ ಸಾಕು ಇವರು ತಿಪಟೂರಿಗೆ ಹೊರಟು ಬಿಡೋರು. ಹಾಗೆಯೇ ರಾಮಸ್ವಾಮಿಯವರೂ ಬೆಂಗ್ಳೂರಿಗೆ ಹೊರಟು ಬಂದು ಬಿಡೋರು! ನಿಜ ಹೇಳಬೇಕೂಂದ್ರೆ, ನಾನು ಈ ಒಂದು ಜನ್ಮದಲ್ಲಿ ಮಾತ್ರ ನಮ್ಮೆಜಮಾನ್ರ ಜೊತೆ ಸೇರಿಕೊಂಡಿರಬಹುದು. ಆದ್ರೆ ರಾಮಸ್ವಾಮಿಯವರು ಏಳೇಳು ಜನ್ಮದಿಂದಲೂ ನಮ್ಮೆಜಮಾನ್ರ ಜೊತೆಗಿರುವವರು! ಅವರ ಜೊತೆ ಒಂದೇ ಒಂದು ಗಂಟೆ ಮಾತಾಡಿದರೂ ಸಾಕು ನಮ್ಮೆಜಮಾನ್ರು ಒಂದಿಡೀ ತಿಂಗಳ ಕಾಲ ಲವಲವಿಕೆಯಿಂದಿರೋರು…ಪರಿಸ್ಥಿತಿ ಹೀಗಿರುವಾಗ ರಾಮಸ್ವಾಮಿ ನನ್ನ ಪಾಲಿಗೆ ಸವತಿ ಅಲ್ವಾ ನೀವೇ ಹೇಳಿ..?’ – ಎಂದು ನನಗೇ ಪ್ರಶ್ನೆ ಹಾಕಿದ್ದರು ಪಾರ್ವತಮ್ಮ!
ಇದಾಗಿ ದಶಕಗಳೇ ಕಳೆದಿವೆ, ರಾಜಕುಮಾರ್ ಇಲ್ಲ, ಪಾರ್ವತಮ್ಮನೂ ಇಲ್ಲ. ಆದರೆ ನೆನಪುಗಳು ಮಾತ್ರ ಸದಾ ನನ್ನನ್ನು ಕಾಡುತ್ತಿರುತ್ತವೆ…
“””””””””””””””””””””””””””””””””””””””””””””””””””””””””””””””””””””””””””””””
Pic : ಪ್ರವೀಣ ನಾಯಕ್
