ಮನಸ್ಸಿಗೆ ಇಳಿಯುವಂತಹ ಕಥೆ ಹೇಳಲಿದ್ದಾರೆ ನಾಗರಾಜ್ ಸೋಮಯಾಜಿ… ನ.22ಕ್ಕೆ ‘ಮರ್ಯಾದೆ ಪ್ರಶ್ನೆ’ ತೆರೆಗೆ
ಈ ವಾರ ಬಿಡುಗಡೆಗೊಳ್ಳಲಿರುವ ಸಿನಿಮಾಗಳ ನಡುವೆ ಭಾರೀ ಕುತೂಹಲ ಮೂಡಿಸಿರುವ ಯಾದಿಯಲ್ಲಿ ಮುಂಚೂಣಿಯಲ್ಲಿರೋದು ಮರ್ಯಾದೆ ಪ್ರಶ್ನೆ..ಇದೇ 22ನೇ ತಾರೀಖು ಚಿತ್ರ ತೆರೆಗಾಣುತ್ತಿದೆ. ಒಂದು ಯಶಸ್ವೀ ಚಿತ್ರ ಯಾವ್ಯಾವ ಸ್ವರೂಪದಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತದೋ, ಆ ಎಲ್ಲ ರೀತಿಗಳಿಂದಲೂ ಸದ್ದು ಮಾಡುತ್ತಿರುವ ‘ಮರ್ಯಾದೆ ಪ್ರಶ್ನೆ’ಯಲ್ಲಿ ಸುನೀಲ್ ರಾವ್, ಶೈನ್ ಶೆಟ್ಟಿ , ರಾಕೇಶ್ ಅಡಿಗ, ಪೂರ್ಣಚಂದ್ರ ಮೈಸೂರು ಸೇರಿದಂತೆ ಹೆಸರಾಂತ ಕಲಾವಿದರ ದಂಡು ಹಾಗೂ ಪ್ರತಿಭಾವಂತ ತಂತ್ರಜ್ಞರ ತಂಡ ಚಿತ್ರಕ್ಕಾಗಿ ದುಡಿದಿದೆ. ಅದ್ರಲ್ಲಿಯೂ ನಾಗರಾಜ್ ಸೋಮಯಾಜಿ ಕಲಾ ಕಸುವು ನಿರೀಕ್ಷೆ ಹೆಚ್ಚಿಸಿದೆ.
ನಿರ್ದೇಶಕ ನಾಗರಾಜ್ ಸೋಮಯಾಜಿ ಪಕ್ಕ ಮನರಂಜನಾತ್ಮಕ ಗುಣಗಳೊಂದಿಗೆ ಈ ಚಿತ್ರವನ್ನು ಅಣಿಗೊಳಿಸಿದ್ದಾರೆ. ಅಂದಹಾಗೇ ಇದು ನಾಗರಾಜ್ ಅವರ ಪಾಲಿಗೆ ಮೊದಲ ಹೆಜ್ಜೆ. ಈ ಮೊದಲ ಹೆಜ್ಜೆಯಲ್ಲಿಯೇ ವಿಶೇಷ ಚಿತ್ರವೊಂದನ್ನು ಪ್ರೇಕ್ಷಕರ ಮುಂದೆ ಹಾಜರುಪಡಿಸಲು ಹೊರಟಿದ್ದಾರೆ. ಆರ್ ಜೆ ಪ್ರದೀಪ್ ಹೆಣೆದ ಕಥೆಯನ್ನು ಅವರು ಅಚ್ಚುಕಟ್ಟಾಗಿ ದೃಶ್ಯರೂಪಕ್ಕೆ ಇಳಿಸಿದ ಖುಷಿ ಅವರಲ್ಲಿದೆ. ನವೆಂಬರ್-22 ರಂದು ಚಿತ್ರ ರಿಲೀಸ್ ಆಗುತ್ತಿದೆ. ಈ ಮೂಲಕ ಕನ್ನಡಿಗರಿಗೆ ಮರ್ಯಾದೆ ಪ್ರಶ್ನೆ ಚಿತ್ರ ಬದುಕಿನ ಹೊಸದೊಂದು ಅಧ್ಯಾಯವನ್ನ ಕಟ್ಟಿಕೊಡಲಿದೆ. ಸಿನಿಮಾದಲ್ಲಿ ಸಾಕಷ್ಟು ಪಾತ್ರಗಳಿವೆ. ಆದರೆ, ಈ ಎಲ್ಲ ಪಾತ್ರಗಳ ನೈಜವಾಗಿಯೇ ಅಭಿನಯಿಸಿರೋದು ಕೂಡ ಕಾಣಿಸುತ್ತದೆ.
ದಿ ಬೆಸ್ಟ್ ಆಕ್ಟರ್ ಹಾಗೂ ಮೈಕೋ ಕಿರುಚಿತ್ರ ಮಾಡಿ ಸೈ ಎನಿಸಿಕೊಂಡಿರುವ ನಾಗರಾಜ್ ಸೋಮಯಾಜಿ ಫೋಕೋಸ್ ಫೋಟೋಗ್ರಫಿ ಮೂಲಕ ಹೆಚ್ಚು ಖ್ಯಾತಿ ಪಡೆದವರು. ಸಂಚಾರಿ ವಿಜಯ್ ನಟನೆಯ ಪುಕ್ಸಟ್ಟೆ ಲೈಫು ಸಿನಿಮಾ ನಿರ್ಮಾಣ ಮಾಡಿ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಅವರೀಗ ಮಧ್ಯಮ ವರ್ಗದವರ ಮರ್ಯಾದೆ ಪ್ರಶ್ನೆ ಕಥಾನಕವನ್ನು ಹರವಿಡಲು ಹೊರಟ್ಟಿದ್ದಾರೆ. ಅವರ ಮೊದಲ ಪ್ರಯತ್ನಕ್ಕೆ ಸಕ್ಕತ್ ಸ್ಟುಡಿಯೋ ಸಾಥ್ ಕೊಟ್ಟಿದೆ. ಕಥೆ ಒದಗಿಸಿ ಚಿತ್ರತಂಡದ ಜೊತೆ ಸಾಗಿರುವ ಆರ್ ಜೆ ಪ್ರದೀಪ್ ಕ್ರಿಯೇಟಿವ್ ಹೆಡ್ ಆಗಿಯೂ ಬೆಂಬಲ ನೀಡಿದ್ದಾರೆ.