ಮೋಷನ್ ಪೋಸ್ಟರ್ ನಲ್ಲೇ ಮೋಡಿ ಮಾಡಿದ “ರಾಜು ಜೇಮ್ಸ್ ಬಾಂಡ್”
ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ ಗುರುನಂದನ್ ನಾಯಕರಾಗಿ ನಟಿಸಿರುವ ಈ ಚಿತ್ರ ಡಿಸೆಂಬರ್ 27 ರಂದು ತೆರೆಗೆ
ಕರ್ಮ ಬ್ರೋಸ್ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ, ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ
“ಫಸ್ಟ್ ರ‍್ಯಾಂಕ್ ರಾಜು” ಖ್ಯಾತಿಯ ಗುರುನಂದನ್ ನಾಯಕರಾಗಿ ನಟಿಸಿರುವ “ರಾಜು ಜೇಮ್ಸ್ ಬಾಂಡ್ ” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಬಹು ನಿರೀಕ್ಷಿತ ಈ ಚಿತ್ರ ಡಿಸೆಂಬರ್ 27 ರಂದು ಬಿಡುಗಡೆಯಾಗಲಿದೆ. ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ (ಲಂಡನ್) ಮತ್ತು ಕಿರಣ್ ಭರ್ತೂರು (ಕ್ಯಾನೆಡಾ) ಮೋಷನ್ ಪೋಸ್ಟರ್ ಅನಾವರಣ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
“ರಾಜು ಜೇಮ್ಸ್ ಬಾಂಡ್” ಚಿತ್ರದಲ್ಲಿ ನೀವು “ಫಸ್ಟ್ ರ‍್ಯಾಂಕ್ ರಾಜು” ಗುರುನಂದನ್ ನನ್ನು ನೋಡುವುದಿಲ್ಲ. ಆ ಜಾನರ್ ನಿಂದ ಅವರನ್ನು ಆಚೆಗೆ ಕರೆ ತಂದಿದ್ದೀವಿ. ಈ ಚಿತ್ರ, ನೋಡುಗನಿಗೆ ಯಾವುದೇ ಅಶ್ಲೀಲ ಸಂಭಾಷಣೆ ಇಲ್ಲದ ಪರಿಶುದ್ಧ ಮನೋರಂಜನೆ ನೀಡುತ್ತದೆ. ಎರಡುಕಾಲು ಗಂಟೆಗಳ ಚಿತ್ರದಲ್ಲಿ ಮಕ್ಕಾಲು ಗಂಟೆ ನೀವು ನಗುವಿಗೆ ಮೀಸಲಿಡಬೇಕು. ವರ್ಷದ ಕೊನೆಯನ್ನು ನಗುನಗುತ್ತಾ ಸಂಭ್ರಮಿಸಿ, ನೂತನ ವರ್ಷವನ್ನು ಸ್ವಾಗತಿಸೋಣ. ರವಿಶಂಕರ್, ಚಿಕ್ಕಣ್ಣ, ಸಾಧುಕೋಕಿಲ, ಅಚ್ಯುತ ಕುಮಾರ್, ಜೈಜಗದೀಶ್ ಹೀಗೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ಮೃದುಲಾ ಈ ಚಿತ್ರದ ನಾಯಕಿ. ಕನ್ನಡ ಹಾಗೂ ಹಿಂದಿ ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ಈ ಚಿತ್ರ ಬಿಡುಗಡೆಯಾಗುತ್ತಿದೆ. ಎಲ್ಲಾ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ಉತ್ತಮವಾಗಿ ಮೂಡಿಬಂದಿರುವ ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ದೀಪಕ್ ಮಧುವನಹಳ್ಳಿ.
ನಿರ್ದೇಶಕ ದೀಪಕ್ ಮಧುವನಹಳ್ಳಿ ಪರಿಶುದ್ಧ ಮನೋರಂಜನೆಯ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಅದಕ್ಕೆ ಕಲಾವಿದರು, ತಂತ್ರಜ್ಞರು ಸಾಥ್ ನೀಡಿದ್ದಾರೆ. ನಗುವೇ ಪ್ರಧಾನವಾಗಿರುವ ಈ ನಮ್ಮ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆಯಿದೆ. ನೋಡುಗರು ಕೊಟ್ಟ ದುಡ್ಡಿಗೆ ಮೋಸಮಾಡದ ಸಿನಿಮಾವಿದು ಎಂದು ಧೈರ್ಯವಾಗಿ ಹೇಳುತ್ತೇವೆ. ಕನ್ನಡದ ಜೊತೆಗೆ ಹಿಂದಿಯಲ್ಲೂ ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರು.
ನನ್ನ ಹೆಸರು ಎಷ್ಟೋ ಜನಕ್ಕೆ ಗೊತ್ತಿಲ್ಲ. “ಫಸ್ಟ್ ರ‍್ಯಾಂಕ್ ರಾಜು” ಅಂತಲೇ ಹೋದ ಕಡೆಯಲ್ಲೆಲ್ಲಾ ಗುರುತಿಸುತ್ತಾರೆ ಎಂದು ಮಾತನಾಡಿದ ನಾಯಕ ಗುರುನಂದನ್, ಈ ಚಿತ್ರದ ನಿರ್ದೇಶಕರು ನನ್ನ ಹಿಂದಿನ ಜಾನರ್ ಗೆ ಬ್ರೇಕ್ ಹಾಕಿದ್ದಾರೆ. ನನ್ನ ಕೈಯಲ್ಲಿ ಡ್ಯಾನ್ಸ್, ಆಕ್ಷನ್ ಮಾಡಿಸಿದ್ದಾರೆ. ನಿರ್ಮಾಪಕರು ಯಾವುದೇ ಕೊರತೆ ಇಲ್ಲದ ಹಾಗೆ ಸಿನಿಮಾ ಮಾಡಿದ್ದಾರೆ. ನನ್ನ ಮೊದಲ ಚಿತ್ರದಿಂದಲೂ ತಾವು ನೀಡುತ್ತಾ ಬಂದಿರುವ ಪ್ರೋತ್ಸಾಹವನ್ನು ಈ ಚಿತ್ರದಲ್ಲೂ ಮುಂದುವರೆಸಿ ಎಂದರು.
ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ನಾಯಕಿ ಮೃದುಲಾ ತಿಳಿಸಿದರು. ನಾಲ್ಕು ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದೇನೆ. ಎರಡು ಹಾಡುಗಳು ಭಾರತದಲ್ಲಿ, ಮತ್ತೆರೆಡು ಹಾಡುಗಳು ಲಂಡನ್ ನಲ್ಲಿ ಚಿತ್ರೀಕರಣಗೊಂಡಿದೆ ಎಂದು ನೃತ್ಯ ನಿರ್ದೇಶಕ ಮುರಳಿ ಹೇಳಿದರು. ಛಾಯಾಗ್ರಾಹಣದ ಕುರಿತು ಛಾಯಾಗ್ರಾಹಕ ಮನೋಹರ್ ಜೋಶಿ ಮಾತನಾಡಿದರು.