ಜನಮನಸೂರೆಗೊಂಡ ಸಂಗೀತ ನೃತ್ಯ ಸಂಭ್ರಮ
ಜನರಂಜನ, ಜನ ಶಿಕ್ಷಣ ಜನಕಲ್ಯಾಣ ಈ ಮೂರು ಮೌಲ್ಯಗಳನ್ನು ಹೊಂದಿರತಕ್ಕಂತ ಸಂಗೀತ ಮತ್ತು ಸಾಹಿತ್ಯ ಸರ್ವಕಾಲಕ್ಕೂ ಸಲ್ಲುವಂತಹದು ಎಂದು ಹಿರಿಯ ಜಾನಪದ ವಿದ್ವಾಂಸರಾದ ಪ್ರೊ. ಬಿ.ಆರ್. ಪೊಲೀಸ್ ಪಾಟೀಲರು ಹೇಳಿದರು.
ಅವರು ಇತ್ತೀಚಿಗೆ ಬೆಂಗಳೂರಿನ ಶರಣ್ಸ್ ಮ್ಯೂಸಿಕ್ ಅಕಾಡೆಮಿಯ ಕನ್ನಡ ರಾಜ್ಯೋತ್ಸವ -2024 ಹಾಗೂ ಸಂಗೀತ-ನೃತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜನಪದರು ಜನರಂಜನ, ಜನ ಶಿಕ್ಷಣ, ಜನಕಲ್ಯಾಣ ಎಂಬ ತತ್ವಗಳನ್ನು ತಮ್ಮ ಸಂಗೀತ ಮತ್ತು ಸಾಹಿತ್ಯದಲ್ಲಿ ಅಳವಡಿಸಿಕೊಂಡು ಸಮಾಜಮುಖಿಯಾಗಿದ್ದರು.ಆದರೆ,ಇತ್ತೀಚಿಗೆ ಸಂಗೀತದಲ್ಲಿ ಕೇವಲ ಜನರಂಜನೆಗೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು ಜನಶಿಕ್ಷಣ ಮತ್ತು ಜನಕಲ್ಯಾಣ ಅಂಶಗಳು ವಿರಳವಾಗುತ್ತಿವೆ ಎಂದು ವಿಷಾದವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯುವ ಸಾಹಿತಿ ರೇಣುಕಾಚಾರ್ಯ ಹಿರೇಮಠ ಮಾತನಾಡಿ, ಅನ್ಯಭಾಷೆಗಳ ಪ್ರಭಾವಗಳ ಮಧ್ಯೆಯೂ ಬೆಂಗಳೂರಿನಲ್ಲಿ ಕನ್ನಡವನ್ನು ಉಳಿಸಿ,ಬೆಳೆಸುವಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿರುವ ಶರಣ್ಸ್ ಮ್ಯೂಜಿಕ್ ಅಕಾಡೆಮಿಯ ಕಾರ್ಯವನ್ನು ಶ್ಲಾಘಿಸಿದರು.
ಹಿರಿಯ ರಂಗಕರ್ಮಿಗಳಾದ ಶ್ರೀಯುತ ಜ್ಹಫರ್ ಮೊಹಿಯುದ್ದೀನ್ , ಸದಾಶಿವ ಕಾಂಬಳೆ, ಅಧ್ಯಕ್ಷರು, ಬೆಂಗಳೂರು ಜಲಮಂಡಳಿ ಪ. ಜಾ. ಮತ್ತು ಪ. ಪಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಅಕ್ಷತಾ ಅರ್ ಮುರಗೋಡರವರು ಉಪಸ್ಥಿತರಿದ್ದರು.
ಅಕಾಡೆಮಿಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಪಂ. ಶರಣ್ ಚೌಧರಿ ರವರ ಮಾರ್ಗದರ್ಶನದಲ್ಲಿ ಕನ್ನಡದ ಸುಪ್ರಸಿದ್ಧ ಗೀತೆಗಳನ್ನು ವಿವಿಧ ಕಲಾವಿದರು ಪ್ರಸ್ತುತಪಡಿದರು.ಕಲಾದೇಗುಲ ಶ್ರೀನಿವಾಸ್ ರವರು ನಿರೂಪಿಸಿ ವಂದಿಸಿದರು.