ತೇರದಾಳ : ಸಂಭ್ರಮದ ವೆಂಕಟೇಶ್ವರ ರಥೋತ್ಸವ
ತೇರದಾಳ : ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನವರಾತ್ರಿ ಉತ್ಸವದ ಅಂಗವಾಗಿ ಪಟ್ಟಣದಲ್ಲಿ ಹಮ್ಮಿಕೊಂಡ ವೆಂಕಟೇಶ್ವರ ದೇವಸ್ಥಾನದ ರಥೋತ್ಸವ ಶ್ರದ್ಧಾ ಭಕ್ತಿ ಹಾಗೂ ಸಡಗರ ಸಂಭ್ರಮದಿಂದ ಜರುಗಿತು.
ಅರ್ಚಕರ ವೇದ ಘೋಷ, ಮಂತ್ರಗಳೊಂದಿಗೆ ಜರುಗಿದ ರಥೋತ್ಸವಕ್ಕೆ ದಾರಿಯುದ್ದಕ್ಕೂ ಸೇರಿದ ಭಕ್ತರು ಸಾಕ್ಷಿಯಾದರು. ವೆಂಕಟೇಶ್ವರರ ಮೂರ್ತಿಯನ್ನು ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಜಾಗಟೆ, ಘಂಟಾ ನಾದ ರಥೋತ್ಸವಕ್ಕೆ ಮೆರಗು ತಂದಿದ್ದವು. ಕಬ್ಬು, ಬಾಳೆ ಗೊನೆಯುಳ್ಳ ಬಾಳೆ ಗಿಡ ಹಾಗೂ ಹೂವಿನ ಹಾರಗಳಿಂದ ರಥವನ್ನು ಸಿಂಗರಿಸಲಾಗಿತ್ತು. ಹಗಲು ದಿವಟಿಗೆ ರಥಕ್ಕೆ ಮೆರಗು ನೀಡಿತ್ತು. ವೆಂಕಟರಮಣ ಗೋವಿಂದಾ ಗೋವಿಂದಾ ಎಂಬ ಜಯಘೋಷ ಮುಗಿಲು ಮುಟ್ಟಿತ್ತು. ತೆಂಗಿನಕಾಯಿ ಒಡೆದು ಕರ್ಪೂರ ಹಚ್ಚಿ, ಉದಬತ್ತಿ ಬೆಳಗಿ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಶನಿವಾರ ಬೆಳಿಗ್ಗೆ ಆರಂಭವಾದ ರಥೋತ್ಸವ ಕಿಲ್ಲಾ ಭಾಗ, ಚಾವಡಿ ಸರ್ಕಲ್, ಪೇಠಭಾಗ, ನಡುಪೇಠ, ಜವಳಿ ಬಜಾರ ಮೂಲಕ ಶ್ರೀಸಿದ್ದೇಶ್ವರ ಗಲ್ಲಿ, ಮೋಪಗಾರ ಗಲ್ಲಿಯಲ್ಲಿರುವ ಮೂಲ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿದ ನಂತರ ಕಿಲ್ಲಾ ಭಾಗದ ದೇವಸ್ಥಾನಕ್ಕೆ ಮರಳಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸದ್ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಟ್ರಸ್ಟಿಗಳಾದ ಗುರುರಾಜ ಕುಲಕರ್ಣಿ, ಬಾಳು ದೇಶಪಾಂಡೆ, ಗುಂಡು ದೇಶಪಾಂಡೆ, ಅತುಲ ದೇಶಪಾಂಡೆ, ಸುಧೀಂದ್ರ ಕಟ್ಟಿ, ಉದಯ ಬೆಳಗಲಿ, ರಾಘು ಜೋಶಿ, ಕಿರಣ ದೇಶಪಾಂಡೆ, ಚಿದಂಬರ ಬಂಕ, ವಿರಾಜ ಬಂಕ, ಗಿರೀಶ ದೇಶಪಾಂಡೆ, ಪ್ರಭಾಕರ ಪಾರಗಾಂವಕರ, ರಾಮ ಜೋಶಿ, ರಮೇಶ ಬೆಳಗಲಿ, ಸತೀಶ ಬೆಳಗಲಿ, ಅಮೀತ ಪಾರಗಾಂವಕರ, ನ್ಯಾಯವಾದಿ ಶ್ಯಾಮ ಸತ್ತಿಕರ, ರಬಕವಿ ಬನಹಟ್ಟಿ ನ್ಯಾಯವಾದಿ ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ, ಅಶೋಕ ಅಳಗೊಂಡ, ಸುರೇಶ ರೇಣಕೆ, ವಿಷ್ಣು ಕಟ್ಟಿ, ಗೋವಿಂದಾಚಾರ್ಯ ಜೋಶಿ, ತಿರುಪತಿ ಜೋಶಿ, ಡಾ. ಪ್ರಕಾಶ ನಾಡಪುರೋಹಿತ, ಡಾ.ದೇಶಪಾಂಡೆ(ವೆಟರನರಿ), ಶೇಷಗಿರಿ ಜೋಶಿ, ಪುಟ್ಟು ಕುಲಕರ್ಣಿ ಸೇರಿದಂತೆ ವಿಪ್ರ ಸಮಾಜದ ಮುಖಂಡರು, ಯುವಕರು, ಮಾತೆಯರು, ಮಕ್ಕಳು ಇದ್ದರು.