ಧರ್ಮದಿಂದ ನಡೆದರೆ ನಮ್ಮ ಜೀವನ ಪಾವನವಾಗುತ್ತದೆ-ಗಂಗಾಧರ ಶ್ರೀ
ತೇರದಾಳ : ಧರ್ಮವನ್ನು ನಾವು ಎಲ್ಲಿಯವರೆಗೆ ರಕ್ಷಿಸುತ್ತವೆಯೋ ಅಲ್ಲಿಯವರೆಗೆ ಧರ್ಮ ನಮ್ಮನ್ನು ಕಾಪಾಡುತ್ತದೆ. ನಾವು ಧರ್ಮ ಬಿಟ್ಟರೆ ಧರ್ಮ ನಮ್ಮನ್ನು ಕೈಬಿಡುತ್ತದೆ ಆಗ ನಾವು ನಾಶವಾಗುವುದು ಖಚಿತ. ದಾನ ಧರ್ಮಗಳನ್ನು ಮಾಡುವುದು. ಮಠಾಧೀಶರಿಗೆ ಶರಣಾಗಿ ನಡೆಯುವುದು, ತಂದೆ ತಾಯಿಯನ್ನು ಗೌರವದಿಂದ ಕಾಣುವುದು ಇವೆಲ್ಲವೂ ಸಹ ಧರ್ಮವೇ ಆದ್ದರಿಂದ ನಾವು ಧರ್ಮದಿಂದ ನಡೆದರೆ ನಮ್ಮ ಜೀವನ ಪಾವನವಾಗುತ್ತದೆ ಎಂದು ಎಂದು ಹಿರೇಮಠದ ಗಂಗಾಧರ ದೇವರು ಹೇಳಿದರು.
ಪಟ್ಟಣದ ಹಿರೇಮಠದಲ್ಲಿ ದಸರಾ ಹಬ್ಬದ ನಿಮಿತ್ಯ ಹಮ್ಮಿಕೊಂಡ ಒಂಭತ್ತು ದಿನಗಳವರೆಗೆ ದೇವಿ ಆರಾಧನೆ ಹಾಗೂ ಭಜನಾ ಕಾರ್ಯಕ್ರಮ ಸಮಾರೋಪ ಹಾಗೂ ನವರಾತ್ರಿಯ ಕೊನೆಯ ದಿನದಂದು ಸುಮಂಗಲೆಯರ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಾಜಕ್ಕಾಗಿ ನಾವೇನಾದರೂ ಕೊಡುಗೆಯನ್ನು ಕೊಡಬೇಕು ಎಂದರೆ ಸಮಾಜದಲ್ಲಿ ನಿಸ್ವಾರ್ಥಿಯಾಗಿ ನಾವು ಜೀವನ ಸಾಗಿಸಬೇಕು. ಜೀವನದಲ್ಲಿ ಕಷ್ಟ ಸುಖ ಬರುವುದು ಸಹಜ ಆದರೆ ಅದನ್ನು ಎದುರಿಸುವಂತ ಶಕ್ತಿ ನಮ್ಮಲ್ಲಿರಬೇಕು. ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಹೋದರೆ ನಾವು ಭಗವಂತ ಕೃಪೆಗೆ ಪಾತ್ರರಾಗುತ್ತೇವೆ. ಇಲ್ಲಿ ಯಾವುದು ಶಾಶ್ವತವಲ್ಲ ಎಲ್ಲವನ್ನು ನಾವು ಇಲ್ಲಿಯೇ ಎಲ್ಲವನ್ನು ಬಿಟ್ಟು ಹೋಗಬೇಕಾಗುತ್ತದೆ, ಇರುವಷ್ಟು ದಿನ ಒಳ್ಳೆಯ ಕಾರ್ಯಗಳನ್ನು ಮಾಡಿ ಒಳ್ಳೆಯವರೆನಿಸಿಕೊಳ್ಳೋಣ ಎಂದರು.
ಒಂಭತ್ತು ದಿನಗಳವರೆಗೆ ಹಿರೇಮಠದಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸಿಕೊಂಡಿರುವ ಭಜನಾ ಮಂಡಳಿಯವರನ್ನು ಸತ್ಕರಿಸಿದರು. ಶ್ರೀ ಮಠದಲ್ಲಿ ನಡೆದ ಸಭೆ ಸಮಾರಂಭಗಳಲ್ಲಿ ಮುಂದಾಳತ್ವವಹಿಸುವ ಸದ್ಭಕ್ತರನ್ನು ಸನ್ಮಾನಿಸಲಾಯಿತು. ೨೦೧ ಸುಮಂಗಲೆಯರ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಸಮಾರಂಭದ ಕೊನೆಯಲ್ಲಿ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕಮಲಕ್ಕ ವಾಲಿ ಮಾತನಾಡಿದರು. ಈಶ್ವರ ಯಲ್ಲಟ್ಟಿ ನಿರೂಪಿಸಿದರು. ಆರಾಧ್ಯ ಹನಗಂಡಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಈರಪ್ಪ ಬಾಳಿಕಾಯಿ ವಂದಿಸಿದರು.